ರಚನೆ: ಶ್ರೀ ಪುರಂದರದಾಸರು

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪಲ್ಲವಿ ||

ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ || ೧ ||

ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ
ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ || ೨ ||

ಅಡವಿಯೊಳ್ಮನೆ ಮಾಡಿ ಗಿಡಕೆ ತೊಟ್ಟಿಲು ಕಟ್ಟಿ
ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ || ೩ ||

ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೋ ಹೊತ್ತಿಗೆ ನೀ ಕಾಯೋ ಹರಿಯೆ || ೪ ||

ವರ್ಗ: ಪುರಂದರದಾಸ ಸಾಹಿತ್ಯ